ಚಿಲುಮೆ-
ಸಾಂದ್ರವಾಗಿ ಶೇಖರಗೊಂಡ ಭೂಗತ ನೀರು ನೆಲಮಟ್ಟವನ್ನು ತಲುಪಿದಾಗ ಇಲ್ಲವೇ ಬೇರೆ ಕಡೆ ಮಣ್ಣಿನ ಪದರದಿಂದ ಮುಕ್ತವಾದಾಗ ಹೊರಹೊಮ್ಮುವ ನೀರಿನ ಊಟೆ (ಸ್ಪ್ರಿಂಗ್). ಇಂಥ ಒಂದು ಚಿಲುಮೆಯಿಂದ ನೀರು ಸಾಮಾನ್ಯವಾಗಿ ವರ್ಷದ ಉದ್ದಕ್ಕೂ ಜಿನುಗುತ್ತಲೋ ಚಿಮ್ಮುತ್ತಲೋ ಸತತವಾಗಿ ಬರುತ್ತಿರುತ್ತದೆ. ಕೆಲವು ಚಿಲುಮೆಗಳು ಬೇಸಿಗೆಯಲ್ಲಿ ಬತ್ತಿ ಹೋಗುವುದೂ ಉಂಟು. ನೆಲದ ಮೇಲೆ ಬಿದ್ದ ಮಳೆಯ ನೀರಿನಲ್ಲಿ ಕೊಂಚ ಭಾಗ ಇಳಿಜಾರಿನಲ್ಲಿ ಹರಿದು ಹತ್ತಿರದ ತೊರೆಯನ್ನೋ ನದಿಯನ್ನೋ ಕೆರೆಯನ್ನೋ ಸೇರುತ್ತದೆ. ಇನ್ನುಳಿದ ಭಾಗ ಭೂಮಿಯಲ್ಲಿ ಇಮರಿ ಹೋಗುತ್ತದೆ. ಈ ನೀರು ತನಗೆ ಅಡ್ಡಬಂದ ವಿವಿಧ ಶಿಲೆಗಳ ಮೂಲಕ ಹಾದು ಕೆಳಮಟ್ಟಕ್ಕೆ ಜಿನುಗುತ್ತಿರುತ್ತದೆ. ನೀರಿನ ಜಿನುಗುವಿಕೆಯನ್ನು ಅನುಸರಿಸಿ ಶಿಲೆಗಳನ್ನು ವ್ಯಾಪ್ಯಶಿಲೆ ಮತ್ತು ಅವ್ಯಾಪ್ಯ ಶಿಲೆಗಳೆಂದು ಎರಡು ಮುಖ್ಯ ಗುಂಪಾಗಿ ವಿಂಗಡಿಸಬಹುದು. ವ್ಯಾಪ್ಯಶಿಲೆಗಳಲ್ಲಿ ನೀರೇ ಮೊದಲಾದ ದ್ರವಗಳು ಅಲ್ಲಿರುವ ಸೂಕ್ಷ್ಮರಂಧ್ರ, ಬಿರುಕು ಮತ್ತು ಸೀಳುಗಳ ಮೂಲಕ ಪ್ರವಹಿಸುತ್ತವೆ. ಮರಳುಶಿಲೆ, ಕಣಶಿಲೆ ಮುಂತಾದವು ಉತ್ತಮ ಬಗೆಯ ವ್ಯಾಪ್ಯಶಿಲೆಗಳು. ಅವ್ಯಾಪ್ಯಶಿಲೆಗಳಲ್ಲಿ ಅಷ್ಟಾಗಿ ರಂಧ್ರಗಳಾಗಲೀ ಸೀಳುಗಳಾಗಲೀ ಇರದೆ ದ್ರವ ಸುಲಭವಾಗಿ ಪ್ರವಹಿಸಲು ಸಾಧ್ಯವಾಗಲಾರದು. ಜೇಡುಶಿಲೆ, ಸುಣ್ಣಶಿಲೆ ಮುಂತಾದುವು ಈ ವರ್ಗಕ್ಕೆ ಸೇರಿದವು. ಹೀಗೆಯೇ ಶಿಲೆಗಳನ್ನು ಸರಂಧ್ರ ಶಿಲೆಗಳು ಮತ್ತು ಆರಂಧ್ರಶಿಲೆಗಳೆಂದೂ ವಿಂಗಡಿಸಲಾಗಿದೆ. ಸರಂಧ್ರಶಿಲೆಗಳಲ್ಲಿ ರಂಧ್ರಗಳೇ ಇಲ್ಲ. ಇದ್ದರೂ ಬಹು ಸೂಕ್ಷ್ಮ ಮತ್ತು ವಿರಳ. ಈ ಕಾರಣ ನೀರಾಗಲೀ ಇತರ ದ್ರವವಾಗಲೀ ಸುಲಭವಾಗಿ ಪ್ರವಹಿಸಲಾರದು. ಜೇಡು ಶಿಲೆ ಈ ವರ್ಗಕ್ಕೆ ಉತ್ತಮ ಉದಾಹರಣೆ. ಶಿಲೆ ವ್ಯಾಪ್ಯ ಮತ್ತು ಸರಂಧ್ರವಾಗಿದ್ದಲ್ಲಿ ನೀರಿನ ಪ್ರಸರಣ ಅತ್ಯಂತ ಉತ್ತಮ ರೀತಿಯಲ್ಲಿ ಆಗುತ್ತದೆ. ಒಳಗೆ ಇರುವ ನೀರಿನ ಜಿನುಗುವಿಕೆಯಲ್ಲಿ ಈ ಬಗೆಯ ಶಿಲೆಗಳು ಬಹು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭೂರಚನೆಯಲ್ಲಿ ಮೇಲೆ ವಿವರಿಸಿರುವ ಎರಡು ಬಗೆಯ ಶಿಲೆಗಳ ಪರಸ್ಪರ ಸಂಬಂಧವನ್ನು ಅನುಸರಿಸಿ ಹಲವಾರು ಬಗೆಯ ಚಿಲುಮೆಗಳು ಉಂಟಾಗುತ್ತವೆ.

   
ಎಲ್ಲ ಚಿಲುಮೆಗಳಲ್ಲೂ ನೀರು ಒಂದೇ ಮೊತ್ತದಲ್ಲಿ ಚಿಮ್ಮುವುದಿಲ್ಲ. ಹಲವು ಚಿಲುಮೆಗಳಲ್ಲಿ ನಿಧಾನಗಾಗಿ ತೊಟ್ಟಿಕ್ಕುತ್ತಿದ್ದರೆ ಕೆಲವು ಚಿಲುಮೆಗಳಲ್ಲಿ ಧಾರಾಕಾರವಾಗಿ ಚಿಮ್ಮುತ್ತಿರುವುದು. ಹಲವಲ್ಲಂತೂ ಪ್ರತಿ ಮಿನಿಟಿಗೆ 450 ಗ್ಯಾಲನುಗಳಷ್ಟು ನೀರು ಚಿಮ್ಮುತ್ತದೆ. ಈ ದೃಷ್ಟಿಯಿಂದ ಫ್ರಾನ್ಸ್‍ದೇಶದ ಫಾಂಟೀನ್ ಡಿ ವಾಕ್ಲೂಸ್ ಎಂಬ ಚಿಲುಮೆ ಉತ್ತಮವಾದುದು. ಇಲ್ಲಿ ಪ್ರತಿಯೊಂದು ಮಿನಿಟಿಗೆ 4,000 ಸೆಕೆಂಡ್-ಅಡಿಗಳಿಗೂ ಹೆಚ್ಚಿನ ನೀರು ಚಿಮ್ಮುತ್ತಿರುತ್ತದೆ. (1 ಸೆಕೆಂಡ್-ಅಡಿ=7.48 ಗ್ಯಾಲನ್/ಸೆಕೆಂಡ್). ಆದರೆ ಅನೇಕ ದೊಡ್ಡ ಚಿಲುಮೆಗಳಲ್ಲಿ ಇಷ್ಟು ಹೆಚ್ಚಿನ ಮೊತ್ತದಲ್ಲಿ ಕಂಡು ಬರುವುದಿಲ್ಲ. ಅವುಗಳಿಂದ ಸುಮಾರು 500 ಸೆಕೆಂಡ್-ಅಡಿಗಳಿಗೂ ಹೆಚ್ಚಿನ ನೀರು ಚಿಮ್ಮುತ್ತಿರುವುದು. ಚಿಲುಮೆಗಳಿಂದ ಹೊರಬರುವ ನೀರಿನ ಮೊತ್ತವನ್ನು ಅನುಸರಿಸಿ ಮೆಯಿನ್‍ಜರ್ ಎಂಬಾತ ಎಂಟು ಬಗೆಯ ಚಿಲುಮೆಗಳನ್ನು ಗುರುತಿಸಿದ್ದಾನೆ.

ವರ್ಗ                    ಚಿಮ್ಮುವಿಕೆ

1             100ಸೆಕೆಂಡ್-ಅಡಿ ಅಥವಾ ಅಧಿಕ
2             10-100ಸೆಕೆಂಡ್-ಅಡಿ ಅಥವಾ ಅಧಿಕ
3             1-10 ಅಥವಾ ಅಧಿಕ ಸೆಕೆಂಡ್-ಅಡಿ
4             ಪ್ರತಿ ಒಂದು ಮಿನಿಟಿಗೆ 100ಗ್ಯಾಲನ್-1 ಸೆಕೆಂಡ್-ಅಡಿ
5             ಪ್ರತಿ ಒಂದು ಮಿನಿಟಿಗೆ 10-100 ಗ್ಯಾಲನ್
6             ಪ್ರತಿ ಒಂದು ಮಿನಿಟಿಗೆ 1-10 ಗ್ಯಾಲನ್
7             ಪ್ರತಿ ಒಂದು ಮಿನಿಟಿಗೆ 1 ಪಿಂಟಿನಿಂದ 1 ಗ್ಯಾಲನ್ ಅಥವಾ ಪ್ರತಿದಿವಸ 4ರಿಂದ 40 ಬ್ಯಾರಲುಗಳು
8             ಪ್ರತಿ ಒಂದು ಮಿನಿಟಿಗೆ ಒಂದು ಪಿಂಟಿಗಿಂತಲೂ ಕಡಿಮೆ.

   ಚಿಲುಮೆಗಳಲ್ಲಿ ಉಂಟಾಗುವಲ್ಲಿ ಒಂದು ಪ್ರದೇಶದ ಮಳೆಯ ವಾರ್ಷಿಕ ಪರಿಮಾಣ, ಶಿಲೆಗಳ ವ್ಯಾಪ್ಯ ಸ್ಥಿತಿ, ಭೂಮಿಯ ಮೇಲುಮೈ ಲಕ್ಷಣ ಮತ್ತು ಶಿಲಾರಚನೆ ಅಥವಾ ವಿನ್ಯಾಸ ಈ ಅಂಶಗಳು ಬಹು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವುಗಳ ಆಧಾರದ ಮೇಲೆ ಟಾಲ್‍ಮನ್ ಎಂಬಾತ ಚಿಲುಮೆಗಳನ್ನು ಆರು ಗುಂಪುಗಳನ್ನಾಗಿ ವರ್ಗೀಕರಿಸಿದ್ದಾನೆ : 1. ತೆಳುವಾದ ಶಿಲಾ ಹೊರಹೊದಿಕೆಗಳಲ್ಲಿನ ಚಿಲುಮೆಗಳು, 2. ಮಂದವಾದ ಶಿಲಾ ಹೊರ ಹೊದಿಕೆಗಳಲ್ಲಿನ ಚಿಲುಮೆಗಳು 3 ವ್ಯಾಪ್ಯ ಮತ್ತು ಅವ್ಯಾಪ್ಯ ಶಿಲಾಪ್ರಸ್ತರಗಳಲ್ಲಿನ ಚಿಲುಮೆಗಳು, 4. ಶಿಲಾರಂಧ್ರಗಳಿಂದ ಚಿಮ್ಮುವ ಚಿಲುಮೆಗಳು, 5. ಲಾವಾ ಪ್ರವಾಹಗಳ ಬಿರುಕುಗಳಲ್ಲಿನ ಚಿಲುಮೆಗಳು

   	ಮೊದಲನೆಯ ಗುಂಪಿನ ಚಿಲುಮೆಗಳನ್ನು ಗುರುತ್ವ ಚಿಲುಮೆಗಳೆನ್ನಬಹುದು. ಏಕೆಂದರೆ ಇವು ಉಂಟಾಗಲು ಭೂಗುರುತ್ವ ಬಹುಮಟ್ಟಿಗೆ ಕಾರಣ. ಇವುಗಳ ಮುಖ್ಯ ಶಿಲಾವಿನ್ಯಾಸವೆಂದರೆ ಅವ್ಯಾಪ್ಯ ಶಿಲೆಯ ಮೇಲೆ ವ್ಯಾಪ್ಯಶಿಲೆಯಿರುವುದು. ಜಲವಾಹಕಶಿಲೆ ಮಟ್ಟಸವಾಗಿರಬಹುದು ಅಥವಾ ಕೊಂಚಮಟ್ಟಿಗೆ ಮಾಲಿಕೊಂಡಿರಬಹುದು. ಶಿಲಾ ಪ್ರಸ್ತರಗಳು ಅಷ್ಟು ಮಂದವಾಗಿರುವುದಿಲ್ಲ. ಇವಿರುವ ಸ್ಥಳವನ್ನು ಅನುಸರಿಸಿ ಎತ್ತರದ ಚಿಲುಮೆ, ತಪ್ಪಲು ಚಿಲುಮೆ, ಬಂಡೆ ಚಿಲುಮೆ, ದಂಡೆ ಚಿಲುಮೆ ಈ ಮುಂತಾಗಿ ಹೆಸರಿಸಬಹುದು. ಸಾಮಾನ್ಯವಾಗಿ ಈ ವರ್ಗದಲ್ಲಿನ ಚಿಲುಮೆಗಳು ಚಿಕ್ಕವು.
   	ಎರಡನೆಯ ವರ್ಗದ ಚಿಲುಮೆಗಳು ನೆಲಮಟ್ಟವನ್ನು ಜಲಮಟ್ಟ ಛೇದಿಸುವ ಜಾಡಿನಲ್ಲಿ ಕಂಡುಬರುತ್ತವೆ. ಹೀಗಾಗಿ ಇವಕ್ಕೆ ಜಲಮಟ್ಟದ ಚಿಲುಮೆಗಳೆಂದೇ ಹೆಸರುಂಟು. ಇವು ಕಾಣಿಸಿಕೊಳ್ಳುವ ಜಲವಾಹಕ ಶಿಲಾಪ್ರಸ್ತರ ಸಾಕಷ್ಟು ಮಂದವಾಗಿಯೂ ಇರುವುದು. ಇವು ಸಾಮಾನ್ಯವಾಗಿ ಮೆಕ್ಕಲುಭೂಮಿ, ನದಿ ಮರಳು ನಿಕ್ಷೇಪಗಳು, ಹಿಮನದಿಗಳಿಂದಾದ ನಿಕ್ಷೇಪಗಳು, ಮರಳು ಶಿಲಾ ಪ್ರಸ್ತರಗಳಲ್ಲಿ ಕಂಡುಬರುತ್ತವೆ. ಈ ಗುಂಪಿನಲ್ಲಿ ಮುಖ್ಯವಾದವೆಂದರೆ ನದಿ ದಂಡೆಗಳಲ್ಲಿನ ಚಿಲುಮೆಗಳು, ಕಣಿವೆಚಿಲುಮೆಗಳು, ಬೆಟ್ಟದ ಇಳಿಜಾರಿನ ಚಿಲುಮೆಗಳು, ಕೊರಕಲು ಚಿಲುಮೆಗಳು ಮತ್ತು ಮೆಕ್ಕಲು ಚಿಲುಮೆಗಳು. ಇವು ಕೂಡ ಗಾತ್ರದಲ್ಲಿ ಅಷ್ಟು ದೊಡ್ಡವಲ್ಲ. ಇವುಗಳ ಗಾತ್ರವನ್ನು ಜಲವಾಹಕ ಪ್ರಸ್ತರದ ಮಂದ ಮತ್ತು ಜಲಮಟ್ಟದ ಇಳಿವೋರೆ ನಿರ್ಧರಿಸುತ್ತವೆ. ಮೂರನೆಯ ವರ್ಗದ ಚಿಲುಮೆಗಳು ಕಾಣಿಸುಕೊಳ್ಳುವ ಜಲವಾಹಕಶಿಲೆ ಪ್ರಸ್ತರೀ ರಚನೆಯನ್ನು ತೋರಿಸುತ್ತದೆ. ಅಲ್ಲದೆ ಈ ಬಗೆಯ ಪ್ರಸ್ತರ ಮತ್ತು ಅವ್ಯಾಪ್ಯ ಶಿಲಾಪ್ರಸ್ತರಗಳು ಒಂದರ ಮೇಲೊಂದು ಹರಡಿರುತ್ತವೆ. ಇವು ಮಟ್ಟಸವಾಗಿರಬಹುದು ಅಥವಾ ಮಾಲಿಕೊಂಡಿರಬಹುದು. ಹಲವು ಬಾರಿ ಮಡಿಕೆ ಬಿದ್ದಿರುವುದೂ ಉಂಟು ಅಥವಾ ಅವುಗಳ ಹರಿವಿನಲ್ಲಿ ಭಂಗವಾಗಿರುವುದೂ ಉಂಟು. ಜಲವಾಹಕಗಳು ಹೊರದೋರುವ ಸ್ಥಳಗಳಲ್ಲಿ ಈ ಗುಂಪಿನ ಚಿಲುಮೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಇವನ್ನು ಕಣಿವೆಗಳು, ಬೆಟ್ಟದ ಇಳಿಜಾರು ಅಥವಾ ತಪ್ಪಲುಗಳಲ್ಲಿ ನೋಡಬಹುದು. ಸಾಮಾನ್ಯವಾಗಿ ಇವು ಜಲವಾಹಕದ ಅಡಿಯಿಂದ ಉದ್ಭವವಾಗುತ್ತವೆ. ಅಂದರೆ ಜಲವಾಹಕ ಅವ್ಯಾಪ್ಯ ಶಿಲಾಪ್ರಸ್ತರವನ್ನು ಸೋಕುವ ಜಾಡಿನಲ್ಲಿ ಉಂಟಾಗುತ್ತವೆ. ಆದ್ದರಿಂದ ಇವನ್ನು ಸ್ಪರ್ಶ ಚಿಲುಮೆಗಳೆನ್ನಬಹುದು. ಇವು ತೋರಿಬರುವ ಶಿಲಾಪ್ರಸ್ತರಗಳು ಮಟ್ಟಸವಾಗಿರದೆ ಮಡಿಕೆ ಬಿದ್ದಿರಬಹುದು. ಹೀಗೆ ಉಂಟಾದ ರಚನೆಗೆ ಅನುಗುಣವಾಗಿ ಇವನ್ನು ಬಾಗು ಚಿಲುಮೆ, ಕೆಳಮಡಿಕೆಯ ಚಿಲುಮೆ, ಮೇಲ್ಮೆಡಿಕೆಯ ಚಿಲುಮೆ, ಸಂಚಯನ ವಿಳಂಬ ಚಿಲುಮೆ ಎಂದು ಹೆಸರಿಸಲಾಗಿದೆ.

   ಏಕಪ್ರವಣ ಚಿಲುಮೆ (ಬಾಗು ಚಿಲುಮೆ) : ಜಲವಾಹಕ ಎರಡು ಅವ್ಯಾಪ್ಯ ಶಿಲಾ ಪ್ರಸ್ತರಗಳ ನಡುವೆ ಇದ್ದು ಇಡೀ ಶಿಲಾಸಮೂಹ ಒಂದೇ ದಿಕ್ಕಿನಲ್ಲಿ ಮಾಲಿರುತ್ತದೆ. ಜಲವಾಹಕದ ಅಡಿಯಿಂದ ಓರೆಯಾಗಿರುವ ಕಡೆ ನೀರಿನ ಚಿಲುಮೆ ಕಾಣಿಸಿಕೊಳ್ಳುತ್ತದೆ. ಕೆಳಮಡಿಕೆ ಚಿಲುಮೆ ವ್ಯಾಪ್ಯ ಮತ್ತು ಅವ್ಯಾಪ್ಯಶಿಲಾಪ್ರಸ್ತರಗಳು ಒಂದರ ಮೇಲೊಂದಿದ್ದು ಬಾಣಲೆಯೋಪಾದಿಯಲ್ಲಿ ಮಡಿಕೆ ಬಿದ್ದಿರುತ್ತವೆ. ಹೀಗಾಗಿ ವ್ಯಾಪ್ಯ ಶಿಲಾಪ್ರಸ್ತರದ ಮೇಲ್ಭಾಗ ಮತ್ತು ಕೆಳಭಾಗಗಳಲ್ಲಿ ಅವ್ಯಾಪ್ಯಶಿಲಾಪ್ರಸ್ತರಗಳು ಹರಡಿದ್ದು ಶೇಖರವಾದ ನೀರು ಹರಿದು ಹೋಗಲು ಸಾಧ್ಯವಿಲ್ಲ. ಅಲ್ಲದೆ ನೀರಿನ ಶೇಖರಣೆ ಹೆಚ್ಚಿದಂತೆಲ್ಲ ಒತ್ತಡವೂ ಅಧಿಕವಾಗುತ್ತದೆ. ಈ ತೆರವಾದ ಸನ್ನಿವೇಶದಲ್ಲಿ ಭೂಸವೆತದಿಂದ ಮೇಲಿರುವ ವ್ಯಾಪ್ಯಶಿಲಾಪ್ರಸ್ತರ ಸಂಪೂರ್ಣವಾಗಿ ಸವೆದು ಕಣಿವೆಯೊಂದು ಉಂಟಾಗಬಹುದು. ಅಲ್ಲದೆ ಒಳಗೆ ಹುದುಗಿದ್ದ ಜಲವಾಹಕ ಕಣಿವೆಯ ತಳ ಮತ್ತು ಪಾಶ್ರ್ವಗಳಲ್ಲಿ ಹೊರದೋರಿ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದ ನೀರು ಚಿಲುಮೆಯಂತೆ ಹೊರಚಿಮ್ಮುತ್ತದೆ. ಶೇಖರಣೆ ಹೆಚ್ಚಾಗಿದ್ದು ಒತ್ತಡವೂ ಹೆಚ್ಚಾಗಿದ್ದಲ್ಲಿ ಚಿಮ್ಮುವಿಕೆ ಬಹು ರಭಸವಾಗಿರಬಹುದು. ಈ ಬಗೆಯ ಶಿಲಾ ರಚನೆ ಹೊರದೋರದೆ ಭೂಮಿಯ ಒಳಗೇ ಹುದುಗಿರುವುದೂ ಉಂಟು. ಅಂಥ ಪ್ರದೆಶಗಳಲ್ಲಿ ತೋಡಿದ ಬಾವಿ ಜಲವಾಹಕವನ್ನು ಮುಟ್ಟಿದೊಡನೆ ನೀರು ಒಂದೇ ಸಮನೆ ಉಕ್ಕಿಬರುತ್ತದೆ. ಬತ್ತಿಹೋಗುವುದು ಬಹು ಅಪರೂಪ. ಇವನ್ನು ಮೊತ್ತಮೊದಲು ಫ್ರಾನ್ಸಿನ ಆರ್ಟಾಯ್ ಪ್ರಾಂತ್ಯದಲ್ಲಿ ಕಂಡದ್ದರಿಂದ, ಈಬಗೆಯ ಚಿಲುಮೆಗಳಿಗೆ ಆರ್ಟೀಸಿಯನ್ ಚಿಲುಮೆ ಅಥವಾ ಬಾವಿ ಎಂಬ ಹೆಸರುಂಟು. ಕರ್ನಾಟಕದ ಕೊರಟಗೆರೆ, ಪಾವಗಡ, ಮಧುಗಿರಿ ವಲಯದಲ್ಲೂ ಪಾಂಡಿಚೆರಿಯ ಸುತ್ತಮುತ್ತಲೂ ಇವನ್ನು ಕಾಣಬಹುದು.

   ಮೇಲ್ಮಡಿಕೆ ಚಿಲುಮೆ : ಚಿಲುಮೆ ಮಡಿಕೆಯ ತುದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ವ್ಯಾಪ್ಯ ಮತ್ತು ಅವ್ಯಾಪ್ಯಶಿಲಾಪ್ರಸ್ತರಗಳು ಪರಸ್ಪರ ತಾಗಿಕೊಂಡಿರುತ್ತವೆ. ಅವ್ಯಾಪ್ಯ ಶಿಲಾ ಹೊದಿಕೆ ನಶಿಸಿಹೋದಲ್ಲಿ ಚಿಲುಮೆ ಉಂಟಾಗಲು ಅತ್ಯಂತ ಉತ್ತಮ ಸನ್ನಿವೇಶವುಂಟಾಗುತ್ತದೆ.

   ಸಂಚಯನ ವಿಳಂಬ ಚಿಲುಮೆ :  ಎರಡು ಅನನುರೂಪಶೀಲ (ಅನ್‍ಕನ್‍ಫಾರ್ಮೇಬಲ್) ಶಿಲಾರಚನೆಗಳು ಸಂಧಿಸುವ ಜಾಡಿನಲ್ಲಿ ಚಿಲುಮೆಗಳು ಕಾಣಿಸಿಕೊಳ್ಳುತ್ತವೆ. ಅಡಿಯ ಶಿಲೆ ಅವ್ಯಾಪ್ಯವಾಗಿಯೂ ಮೇಲಿನ ಶಿಲಾಪ್ರಸ್ತರ ಜಲವಾಹಕವಾಗಿಯೂ ಇರುವುದು. ಈ ಬಗೆಯ ಚಿಲುಮೆಗಳ ರಚನಾ ವೈಶಿಷ್ಟ್ಯ. ನಾಲ್ಕನೆಯ ವರ್ಗದ ರಂಧ್ರಚಿಲುಮೆಗಳನ್ನು ಸುಣ್ಣಶಿಲಾಪ್ರದೇಶಗಳಲ್ಲಿ ನೋಡಬಹುದು. ಸುಣ್ಣಶಿಲೆ ನೀರಿನಲ್ಲಿ ಸುಲಭವಾಗಿ ಕರಗಿ ಹೋಗಿರುವುದರಿಂದ ಹೆಚ್ಚಿಗೆ ಕರಗಿರುವ ಕಡೆ ಗುಳಿಬಿದ್ದು ಅವುಗಳ ಮೂಲಕ ಶೇಖರವಾದ ನೀರು ಹೊರಕ್ಕೆ ಚಿಮ್ಮುತ್ತದೆ. ಹಲವು ಸಂಧರ್ಭಗಳಲ್ಲಿ ಅದು ಅಲ್ಲೆ ಶೇಖರವಾಗಿ ಸಣ್ಣ ಸರೋವರಗಳಾಗಿ ಮಾರ್ಪಾಡುವುದೂ ಉಂಟು. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಈ ತೆರನಾದ ಚಿಲುಮೆಗಳನ್ನು ಫ್ಲಾರಿಡ, ಜಾರ್ಜಿಯ ಮತ್ತು ಅಲಬಾಮ ಪ್ರಾಂತ್ಯಗಳಲ್ಲಿ ಕಾಣಬಹುದು.

   ಜಲವಾಹಕಗಳ ಮೇಲೆ ಲಾವಾಸ್ತರಗಳಿದ್ದು ಅವುಗಳಲ್ಲಿನ ಸೀಳು, ಬಿರುಕು ಮತ್ತು ರಂಧ್ರಗಳ ಮೂಲಕ ಆಳದಲ್ಲಿರುವ ನೀರು ಹೊರಚಿಮ್ಮುತ್ತದೆ. ಇಂಥ ಚಿಲುಮೆಗಳು ಐದನೆಯ ಗುಂಪಿಗೆ ಸೇರುತ್ತವೆ. ಅಮೆರಿಕದ ಇಡಾಹೋ, ಓರೆಗಾನ್, ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯ ಪ್ರಾಂತ್ಯಗಳಲ್ಲಿನ ಟರ್ಷಿಯರಿ ಮತ್ತು ಕ್ವಾಟರ್ನರಿ ಲಾವಾಗಳಲ್ಲಿ ಕಂಡುಬರುವ ಚಿಲುಮೆಗಳು ಈ ದರ್ಜೆಯವು.

   ಆರನೆಯ ಗುಂಪಿನ ಚಿಲುಮೆಗಳು ಶಿಲಾಸೀಳುಗಳ ಮೂಲಕ ಹೊರಬರುವ ಚಿಲುಮೆಗಳು. ಈ ವರ್ಗದಲ್ಲೂ ಎರಡು ವಿಧವಾದ ಚಿಲುಮೆಗಳನ್ನು ಗುರುತಿಸಬಹುದು : 1. ವ್ಯಾಪ್ಯಶಿಲೆಗಳು ಛೇದಿಸುವ ಬಿರುಕುಗಳಲ್ಲೂ ಸೀಳುಗಳಲ್ಲೂ ತೋರಿಬರುವ ಚಿಲುಮೆಗಳು :2. ಅವ್ಯಾಪ್ಯ ಶಿಲಾ ಹೊಂದಿಕೆಗಳಲ್ಲಿನ ಬಿರುಕು ಮತ್ತು ಸೀಳುಗಳಲ್ಲಿರುವ ಚಿಲುಮೆಗಳು. ಇವುಗಳಲ್ಲಿ ನೀರು ಅಡಿಯಲ್ಲಿರುವ ಜಲವಾಹಕದಿಂದ ಬರುತ್ತದೆ.

   ಚಿಲುಮೆಗಳ ನೀರಿನ ಉಷ್ಣತೆ ಮತ್ತು ರಾಸಾಯನಿಕ ಸಂಯೋಜನೆಗೆ ಅನುಗುಣವಾಗಿ ಅವನ್ನು ಬಿಸಿನೀರಿನ ಚಿಲುಮೆಗಳು, ಖನಿಜ ಚಿಲುಮೆಗಳು ಎಂದು ವಿಂಗಡಿಸಬಹುದು. ಹಲವು ಬಿಸಿನೀರಿನ ಚಿಲುಮೆಗಳನ್ನು ಗೈಸರು ಎಂದೂ ಕರೆಯುವುದುಂಟು. ಇವುಗಳಲ್ಲಿ ನೀರಿನ ಚಿಮ್ಮುವಿಕೆ ಸದಾ ಕಾಲದಲ್ಲೂ ತೋರಿಬರದೆ ಕೇವಲ ನಿಯತಕಾಲಗಳಲ್ಲಿ ಮಾತ್ರ ಕಂಡುಬರುತ್ತದೆ. ಅಮೆರಿಕದ ಎಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್, ನ್ಯೂಜಿಲೆಂಡ್ ಮತ್ತು ಐಸ್‍ಲೆಂಡ್ ದೇಶಗಳ ಬಿಸಿನೀರಿನ ಚಿಲುಮೆಗಳು ಬಹು ಪ್ರಸಿದ್ಧವಾದವು. ಚಿಲುಮೆಗಳ ನೀರಿನಲ್ಲಿ ವಿವಿಧ ಖನಿಜಗಳಿದ್ದಲ್ಲಿ ಅದು ಉತ್ತಮ ವೈದ್ಯಕೀಯ ಗುಣಗಳನ್ನು ಪಡೆದಿರುತ್ತದೆ. ಚರ್ಮರೋಗಗಳಿಗಂತೂ ರಾಮಬಾಣ. ಬಿಹಾರ್ ಮತ್ತು ಹಿಮಾಲಯ ತಪ್ಪಲು ಪ್ರಾಂತಗಳಲ್ಲಿ ಈ ಬಗೆಯ ಹಲವಾರು ಚಿಲುಮೆಗಳಿವೆ. ಇವು ಉತ್ತಮ ವಿಹಾರ ಸ್ಥಳಗಳು ಹಾಗೂ ಆರೋಗ್ಯಧಾಮಗಳು ಕೂಡ. ಕೆಲವು ಖನಿಜಗಳ ನೀರು ವಿಕಿರಣಪಟುತ್ವವನ್ನು ಸಹ ಹೊಂದಿರುವುದುಂಟು. ಬಿಸಿನೀರಿನ ಚಿಲುಮೆಗಳ ದ್ವಾರದ ಸುತ್ತ ಟ್ರಾವರ್‍ಟೈನ್, ಸಿಕತದ ಸಿಂಟರ್, ಗಂಧಕ ಮುಂತಾದ ವಸ್ತುಗಳು ಶೇಖರವಾಗುತ್ತವೆ. ಖನಿಜಪೂರಿತ ಚಿಲುಮೆ ನೀರಿನ ದ್ರಾವಣಶಕ್ತಿ ಕುಗ್ಗಿ ಅದರಲ್ಲಿ ಸೇರಿದ್ದ ಖನಿಜಾಂಶಗಳು ನಿಕ್ಷೇಪಗಳಾಗಿ ಮಾರ್ಪಡುತ್ತವೆ.

   ಭಾರತದಲ್ಲಿನ ಚಿಲುಮೆಗಳು : ಭಾರತದ ಭೂವಿಜ್ಞಾನ ಸಂಸ್ಥೆಯ ಮೊದಲನೆಯ ಪರಿಶೀಲನೆಯ ಪ್ರಕಾರ (1882) ದೇಶದ ವಿವಿಧ ಭಾಗಗಳಲ್ಲಿರುವ 300 ಚಿಲುಮೆಗಳ ಪಟ್ಟಿ ಪ್ರಕಟವಾಗಿದೆ. ಪುನಃ ಪರಿಶೀಲನಾನಂತರ 1918ರಲ್ಲಿ 43 ಹೊಸ ಚಿಲುಮೆಗಳನ್ನು ಈ ಪಟ್ಟಿಗೆ ಸೇರಿಸಲಾಯಿತು. ಈಚೆಗೆ ಅಂದರೆ 1939-41ರಲ್ಲಿ ಬಿಹಾರ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳಲ್ಲಿರುವ ಚಿಲುಮೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಲಾಗಿದೆ. ಭಾರತದ ಚಿಲುಮೆಗಳು ನಾಲ್ಕು ಜಾಡುಗಳಲ್ಲಿ ಹರಡಿವೆ: 1. ಬಿಹಾರಿನ ರಾಜಗೃಹ ಮತ್ತು ಮಾಂಘೀರ್ ಜಾಡು ; ಮತ್ತು ಕಲ್ಲಿದ್ದಲು ಗಣಿ ಪ್ರದೇಶಗಳ ಅಂಚಿಗೆ ಸಮಾಂತರವಾಗಿರುವ ಜಾಡು; 2. ಪಶ್ಚಿಮ ಕರಾವಳಿಯ ರತ್ನಗಿರಿ, ಥಾನಾ, ಕೊಲಾಬ ಮತ್ತು ಸೂರತ್ ಜಿಲ್ಲೆಗಳನ್ನೊಳಗೊಂಡ ಜಾಡು; 3 ಸಿಂಧ್, ಬಲೂಚಿಸ್ತಾನ ಪ್ರದೇಶ (ಈಗಿನ ಪಾಕಿಸ್ತಾನ); 4 ಹಿಮಾಲಯ ಪ್ರದೇಶ. ಈ ಮುಖ್ಯ ಜಾಡುಗಳಲ್ಲದೆ ಒರಿಸ್ಸದ ಮಹಾನದಿ ಕಣಿವೆ, ಪಶ್ಚಿಮ ಬಂಗಾಳದ ಬೀರ್‍ಭೂಮ್ ಮತ್ತು ಡಾರ್ಜಿಲಿಂಗ್ ಜಿಲ್ಲೆ, ಅಸ್ಸಾಮ್, ಸಿಕ್ಕಿಂ ಮತ್ತು ದಕ್ಷಿಣ ಭಾರತದ ಹಲವಾರು ಪ್ರದೇಶಗಳಲ್ಲೂ ಚಿಲುಮೆಗಳು ಅಲ್ಲಲ್ಲಿ ಚದರಿದಂತೆ ಹರಡಿವೆ. ಇವುಗಳಲ್ಲಿ ಹಲವು ಪ್ರಪಂಚದ ಹೆಸರಾಂತ ಖನಿಜ ಚಿಲುಮೆಗಳಿಗೆ ಸಾಟಿಯಾಗುವಂಥವು. ಬಿಹಾರಿನ ಹಜಾರಿಬಾಗ್ ಜಿಲ್ಲೆಯಲ್ಲಿರುವ ಪಟಾಲ್‍ಸೂರ್ ಮತ್ತು ಪರಾಶ್‍ನಾಥ್ ಚಿಲುಮೆಗಳು ಪ್ರಪಂಚದಲ್ಲಿ ಬಹು ಪ್ರಸಿದ್ಧವಾದ ಫ್ರಾನ್ಸಿನ ಇವಯಾನ್ ಚಿಲುಮೆಗಳಿಗೆ ಸಮವಾಗಿವೆ.
(ಬಿ.ವಿ.ಜಿ.)

   ಕೃತಕ ಚಿಲುಮೆ : ಒತ್ತಡದ ನೀರನ್ನು ಚಿಕ್ಕರಂಧ್ರಗಳ ಮೂಲಕ ಮೇಲ್ಮುಖವಾಗಿ ಹೊರಹೊಮ್ಮಿಸುವಾಗ ಕೃತಕ ಚಿಲುಮೆ ಉಂಟಾಗುತ್ತದೆ. ನಗರಗಳ ಉದ್ಯಾನವನಗಳಲ್ಲಿ ಕೃತಕ ಚಿಲುಮೆಗಳು ಸಾಧಾರಣದೃಶ್ಯಗಳು. ರಾತ್ರಿವೇಳೆ ವರ್ಣವಿದ್ಯುದ್ವೀಪಗಳಿಂದ ಇವನ್ನು ಅಲಂಕರಿಸಿ ಮನರಂಜನೆಯನ್ನು ಪಡೆಯುವುದು ಕೂಡ ವಾಡಿಕೆಯಲ್ಲಿದೆ.
(ಜಿ.ಟಿ.ಜಿ.)